ಪರೀಕ್ಷೆ ಮತ್ತು ಫಲಿತಾಂಶ

Vaman
0
ಪರೀಕ್ಷೆ ಮತ್ತು ಫಲಿತಾಂಶ :
ಪರೀಕ್ಷೆಗಳು ನಡೆಯುತ್ತಿವೆ. ಇನ್ನು ಫಲಿತಾಂಶದ ನಿರೀಕ್ಷೆಯ ಕಾಲ. ಫಲಿತಾಂಶದೊಂದಿಗೆ ಜಿಲ್ಲಾವಾರು ಜಿದ್ದುಗಳು, ಸಂಸ್ಥೆವಾರು ಜಿದ್ದುಗಳು, ನಾವೇ ಜ್ಯೇಷ್ಠ ಎನ್ನುವ ಫಲಕಗಳು, ಅದರೊಂದಿಗೆ ಬೆಸೆದಿರುವ ಶಿಕ್ಷಣೋದ್ಯಮಗಳೆಲ್ಲ ತೆರೆದುಕೊಳ್ಳುತ್ತವೆ. ಈ ಸಂದರ್ಭದಲ್ಲಿ ನಡೆಯಲಿರುವ ಎಲ್ಲ ಮೇಲಾಟಗಳನ್ನೂ ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ಕಲಿಕೆಯ ಪರಿಕಲ್ಪನೆ ಮತ್ತು ಪರೀಕ್ಷೆಯ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಬೇಕು.

ಕಲಿಕೆಯು ಯಾವಾಗಲೂ ಸಮಗ್ರ ಸ್ವರೂಪವನ್ನು ಹೊಂದಿರುತ್ತದೆ ಮತ್ತು ಅದು ಪಠ್ಯಪುಸ್ತಕ ಕೇಂದ್ರಿತ ಅಲ್ಲ‌.‌ ಬದುಕಿನ ಎಲ್ಲ ಅನುಭವಗಳ ಮೂಲಕ ವ್ಯಕ್ತಿಯಲ್ಲಿ ಆಗುವ ಸಕಾರಾತ್ಮಕ ಪರಿವರ್ತನೆಗಳು ಕಲಿಕೆಯೇ ಆಗಿರುತ್ತವೆ.‌ ಪಠ್ಯಪುಸ್ತಕದ ಕಲಿಕೆ ಎಂದಾಗ ಕಲಿಕೆಯ ಪರಿಕಲ್ಪನೆಗೆ ಹೆಚ್ಚು ಸ್ಪಷ್ಟತೆ ಸಿಗುತ್ತದೆ. ಆದರೆ ಕಲಿಕೆಯ ಪರಿಕಲ್ಪನೆಯು ನಿರ್ದಿಷ್ಟ ಪಠ್ಯದ ವ್ಯಾಪ್ತಿಗೆ ಪರಿಮಿತಗೊಂಡೂ ಇರುತ್ತದೆ. ಆದರೆ ಪಠ್ಯದ ಕಲಿಕೆ ಕೂಡ ಸಮಗ್ರತೆಯನ್ನು ಹೊಂದಿಯೇ ಇರುತ್ತದೆ. ನಿರ್ದಿಷ್ಟ ಪಠ್ಯದ ಒಂದು ವಿಷಯವನ್ನು ಅಭ್ಯಾಸ ಮಾಡುವುದೆಂದರೆ ನಿರ್ದಿಷ್ಟ ಮಾಹಿತಿಯನ್ನು ಮಾತ್ರ ತಿಳಿದುಕೊಳ್ಳುವುದಲ್ಲ. ಓದುವ ಕ್ರಮ, ಉಚ್ಚರಿಸುವ ವಿಧಾನ, ಭಾವಾಭಿವ್ಯಕ್ತಿ, ಆಂಗಿಕ ಅಭಿವ್ಯಕ್ತಿ, ಧ್ವನಿಯ ಸ್ವರಭಾರ ಏರಿಳಿತ, ನಿರ್ದಿಷ್ಟ ವಿಷಯಕ್ಕೆ ಇರುವ ಬಹುಮುಖಿ ಚಿಂತನೆಗಳನ್ನು ಅರ್ಥ ಮಾಡಿಕೊಂಡು ನಿರೂಪಿಸುವುದು, ಅದರಿಂದ ಸಮಾಜ ಮತ್ತು ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕಾದ ಕೌಶಲಗಳ‌ ತಿಳಿವು- ಹೀಗೆ ಹಲವಾರು ವಿಷಯಗಳನ್ನು ಒಳಗೊಂಡೇ ಕಲಿಕೆಯು ನಡೆಯುತ್ತದೆ.

ಈ ರೀತಿ ನಡೆದ ಕಲಿಕೆಯನ್ನು ವ್ಯವಸ್ಥಿತವಾದ ರೀತಿಯಲ್ಲಿಯೇ ಕಾಲಕಾಲಕ್ಕೆ ಮೌಲ್ಯಮಾಪನ ಮಾಡಬೇಕು. ಮೌಲ್ಯಮಾಪನದ ಉದ್ದೇಶವೇ ಕಲಿಕೆಯನ್ನು ಉತ್ತಮೀಕರಿಸುವುದಾಗಿರುತ್ತದೆ. ಪರೀಕ್ಷೆಗಳು ಹೀಗಲ್ಲ. ನಿರ್ದಿಷ್ಟ ಕಲಿಕಾ ಸನ್ನಿವೇಶದಲ್ಲಿ ನಡೆದ ಕಲಿಕೆಯು ತೋರಿಸುವ ಅರ್ಹತೆಯ ಬಗ್ಗೆ ತೀರ್ಪು ಕೊಡುವ ರೂಪದಲ್ಲೇ ಪರೀಕ್ಷೆ ಇರುತ್ತದೆ. ಒಂದು ಶೈಕ್ಷಣಿಕ ವರ್ಷದಲ್ಲಿ ಕಲಿತದ್ದರಲ್ಲಿ ಕೆಲವು ವಿಚಾರಗಳನ್ನು ಮೂರು ಗಂಟೆಯ ಅವಧಿಯಲ್ಲಿ ಎಷ್ಟು ಸಮರ್ಥವಾಗಿ ಭಾಷೆಯ ಬರವಣಿಗೆಯ ಮೂಲಕ ನಿರೂಪಿಸಬಲ್ಲ ಎಂಬುದನ್ನು ಮಾತ್ರ ಸಾರ್ವಜನಿಕ ಪರೀಕ್ಷೆಗಳು ಪರೀಕ್ಷಿಸುತ್ತವೆ.

ಆದರೆ ಇಷ್ಟೇ ಆದಾಗಲೂ ಸಮರ್ಪಕವಾಗಿ ಕಲಿಕೆ ಮತ್ತು ಪರೀಕ್ಷೆ ನಡೆದರೆ ಪರೀಕ್ಷೆಯಲ್ಲಿ ಕೆಲವೊಂದು ಸಾಮರ್ಥ್ಯಗಳು ಪರೀಕ್ಷೆಗೆ ಒಳಪಡುತ್ತವೆ. ಉದಾಹರಣೆಗೆ, ಪ್ರಶ್ನೆಪತ್ರಿಕೆಯನ್ನು ರಚಿಸುವಾಗ ನಾಲ್ಕು ಸಾಮರ್ಥ್ಯಗಳನ್ನು ಪ್ರಧಾನವಾಗಿ ಇರಿಸಿಕೊಳ್ಳಲಾಗುತ್ತದೆ.

Exam and Results

Post a Comment

0Comments

Post a Comment (0)